ಮಾರಾಟ ತೆರಿಗೆ
ಪದಾರ್ಥವೊಂದರ ಬಿಕರಿಯ ಸಮಯದಲ್ಲಿ ಅದರ ಮಾರಾಟದ ಬೆಲೆಯ ಮೇಲೆ ನಿಗದಿತ ಪ್ರಮಾಣದಲ್ಲಿ ವಿಧಿಸಲಾದ ತೆರಿಗೆ (ಸೇಲ್ಸ್ ಟ್ಯಾಕ್ಸ್). ಸೇವೆಯೊಂದರ ಮೇಲೂ ಈ ತೆರಿಗೆ ವಿಧಿಸಬಹುದು. ಈಜಿಪ್ಟ್ ಗ್ರೀಕ್ ಮತ್ತು ರೋಮನ್ ನಾಗರಿಕತೆಗಳಲ್ಲಿ ಜನ್ಮತಾಳಿ, ಮುಂದಿನ ಕೆಲವು ಶತಮಾನಗಳಲ್ಲಿ ಅಸ್ಪಷ್ಟ ರೂಪಿನಲ್ಲಿ ಬಳಕೆಯಲ್ಲಿದ್ದು ಮಧ್ಯಯುಗದಲ್ಲಿ ಪೂರ್ತಿ ಇಲ್ಲವಾಗಿ, 17ನೆಯ ಶತಮಾನದಲ್ಲಿ ಯುರೋಪ್ ಖಂಡದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡು 19ನೆಯ ಶತಮಾನದಲ್ಲಿ ಸ್ವಲ್ಪ ಕಾಲ ಕಾಣದಾಗಿ, 1ನೆಯ ಮಹಾಯುದ್ಧದ ಕಾಲದಲ್ಲಿ ಹಣ ಪೂರೈಕೆಗಾಗಿ ಫ್ರಾನ್ಸ್ ಮತ್ತು ಜರ್ಮನ್ ಸರ್ಕಾರ ಕಣ್ಣಿಗೆ ಬಿದ್ದ ಈ ತೆರಿಗೆ ಕೇವಲ 30 ವರ್ಷಗಳ ಅವಧಿಯಲ್ಲಿಯೇ ಪ್ರಬಲವಾಗಿ 20ನೆಯ ಶತಮಾನದ ಉತ್ತರಾರ್ಧದಲ್ಲಿ ಅಧಿಕ ಪ್ರಮಾಣದಲ್ಲಿ ವರಮಾನ ತರುವ ಕೆಲವೇ ತೆರಿಗೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಈ ತೆರಿಗೆ ಯಾವುದೇ ನೈತಿಕ ಬೆಂಬಲ ವಿಲ್ಲದಿದ್ದರೂ ಇದರ ಕೆಲವು ಆರ್ಥಿಕ ಅನುಕೂಲತೆಗಳಿಂದಾಗಿ ಎಲ್ಲಾ ಸರ್ಕಾರಗಳೂ ಇದನ್ನು ಒಪ್ಪಿವೆ. 1038ರ ತನಕ ಭಾರತದಲ್ಲಿ ತಲೆ ಹಾಕದ ಈ ತೆರಿಗೆ ಇಂದು ಭಾರತದ ಎಲ್ಲಾ ರಾಜ್ಯಗಳ ಆದಾಯದ ಮುಖ್ಯ ಮೂಲವಾಗಿದೆ. 

ಈ ತೆರಿಗೆಯನ್ನು ಸ್ಥೂಲವಾಗಿ ಎರಡು ರೂಪಗಳಲ್ಲಿ ಕಾಣುತ್ತೇವೆ. 1) ಸಾರ್ವತ್ರಿಕ (ಜನರಲ್) ಮಾರಾಟ ತೆರಿಗೆ 2) ವಿಶಿಷ್ಟ ಮಾರಾಟ ತೆರಿಗೆ. ಎಲ್ಲಾ ಬಗೆಯ ಪದಾರ್ಥಗಳ ಮಾರಾಟದ ಮೇಲೆ ಈ ತೆರಿಗೆಯನ್ನು ವಿಧಿಸಿದಾಗ ಅದು ಸಾರ್ವತ್ರಿಕ ಮಾರಾಟ ತೆರಿಗೆ ಎನಿಸುತ್ತದೆ. ಹಾಗೆಯೇ ಕೆಲವು ಆಯ್ಕೆಯಾದ ಸರಕುಗಳ ಮೇಲೆ ತೆರಿಗೆ ವಿಧಿಸಿದ್ದು ಅದು ವಿಶಿಷ್ಟ ಮಾರಾಟ ತೆರಿಗೆ ಎನಿಸುತ್ತದೆ. ಸಾರ್ವತ್ರಿಕ ಮಾರಾಟ ತೆರಿಗೆಯನ್ನು ಮತ್ತೆರಡು ಭಾಗಗಳನ್ನಾಗಿ ವಿಂಗಡಿಸಬಹುದು.; ಹಲವು ಹಂತಗಳ ಮಾರಾಟ ತೆರಿಗೆಯ ಮತ್ತು ಏಕಾಂತ ಮಾರಾಟ ತೆರಿಗೆ. ಒಂದು ಪದಾರ್ಥ ಉತ್ಪಾದನೆಯ ಹಂತವನ್ನು ಬಿಟ್ಟು ಅನುಭೋಗಿಯ ಕೈಸೇರುವ ತನಕ ಹಲವು ಮಾರಾಟ ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಅದರ ಮಾರಾಟದ ಪ್ರತಿಯೊಂದು ಹಂತದಲ್ಲೂ ತೆರಿಗೆ ವಿಧಿಸಿದಾಗ ಅದು ಹಲವು ಹಂತಗಳ ಮಾರಾಟ ತೆರಿಗೆ ಎನಿಸುತ್ತದೆ. ಮಾರಾಟದ ಎಲ್ಲಾ ಹಂತಗಳಲ್ಲೂ ತೆರಿಗೆ ವಿಧಿಸದೆ ಯಾವುದಾದರೂ ಒಂದು ಹಂತದ ಮೇಲೆ ತೆರಿಗೆಯನ್ನು ವಿಧಿಸಿದಾಗ ಅದು ಏಕಾಂತ ಮಾರಾಟ ತೆರಿಗೆಯಾಗುತ್ತದೆ. ಮತ್ತೆ ಏಕ ಹಂತ ಮಾರಾಟ ತೆರಿಗೆಯನ್ನು 3 ಭಾಗಗಳನ್ನಾಗಿ ಮಾಡಬಹುದು.; 1. ಉತ್ಪಾದಕನ ಮಾರಾಟ ತೆರಿಗೆ, 2) ಸಗಟು ವ್ಯಾಪಾರದ ಮಾರಾಟ ತೆರಿಗೆ ಮತ್ತು 3. ಚಿಲ್ಲರೆ ಮಾರಾಟ ತೆರಿಗೆ.

ಸಾಧಾರಣವಾಗಿ ಹಲವು ಹಂತಗಳ ಮಾರಾಟ ತೆರಿಗೆಯ ದರ ಕಡಿಮೆಯಾಗಿರುತ್ತದೆ. ಏಕ ಹಂತ ಮಾರಾಟ ತೆರಿಗೆಯ ದರ ಅಧಿಕವಾಗಿರುತ್ತದೆ. ಅತ್ಯಾವಶ್ಯಕ ಆಹಾರ ಪದಾರ್ಥಗಳು, ಕೃಷಿ ಸಲಕರಣೆಗಳು ಇತ್ಯಾದಿಗಳನ್ನು ಈ ತೆರಿಗೆಗಳಿಂದ ಪೂರ್ತಿ ವಿನಾಯಿತಿಗೊಳಿಸಿ ಇತರ ಅವಶ್ಯಕ ವಸ್ತುಗಳ ಮೇಲೆ ಕಡಿಮೆ ದರಗಳನ್ನು ವಿಧಿಸಿ, ಭೋಗ ವಸ್ತುಗಳ ಮೇಲೆ ಹೆಚ್ಚಿನ ದರಗಳನ್ನು ಹಾಕುವುದುಂಟು.
ಮಾರಾಟ ತೆರಿಗೆಯನ್ನು ವಿಧಿಸಲು ಹಲವು ಸಮರ್ಥನೆಗಳನ್ನು ನೀಡಲಾಗಿದೆ ಈ ತೆರಿಗೆಯಿಂದ ಅಧಿಕ ಪ್ರಮಾಣದಲ್ಲಿ ವರಮಾನ ದೊರಕುವುದೇ ಅಲ್ಲದೇ, ಇದು ಬಹು ಶೀಘ್ರವಾಗಿ ಬರುತ್ತದೆ. ಇದರ ವಸೂಲಿಗಾಗಿ ತಗಲುವ ಖರ್ಚು, ಇತರ ತೆರಿಗೆಗಳ ವಸೂಲಿ ಖರ್ಚಿಗೆ ಹೋಲಿಸಿದರೆ, ಬಹು ಕಡಿಮೆ ಎಂಬ ವಾದದಲ್ಲಿ ಸ್ವಲ್ಪ ಸತ್ಯಾಂಶವಿದೆಯಾದರೂ, ಭಾರತದಲ್ಲಿ ಈಚೆಗೆ ಈ ತೆರಿಗೆಯ ಸಲುವಾಗಿ ರಚಿಸಿರುವ ಶಾಸನಗಳ ಮತ್ತು ಅನೇಕ ತಿದ್ದುಪಡಿಗಳ ರಾಶಿಯನ್ನು ನೋಡಿದರೆ, ಈ ತೆರಿಗೆಗಾಗಿ ತಗಲುತ್ತಿರುವ ವೆಚ್ಚ ಹೆಚ್ಚೆನ್ನಬಹುದು. ಒಂದುದೇಶದ ತೆರಿಗೆ ವ್ಯವಸ್ಥೆಯ ಅನೇಕ ಕುಂದು ಕೊರತೆಗಳನ್ನು ನಿವಾರಿಸಿ ಅದನ್ನು ಸದಾ ಸಮತೋಲನದಲ್ಲಿಡಲು ಈ ತೆರಿಗೆ ಒಂದು ಮಹತ್ಸಾಧನ ಎಂಬ ಅಭಿಪ್ರಾಯ ಪ್ರಚಾರದಲ್ಲಿದೆ. ಈ ತೆರಿಗೆಗಳು ತರುವ ವರಮಾನ ಆಗಾಗ್ಗೆ ಕುಗ್ಗುವುದರಿಂದಲೂ, ಮಾರಾಟ ತೆರಿಗೆಯ ವರಮಾನ ಖಚಿತವಾದ್ದರಿಂದಲೂ, ಈ ತೆರಿಗೆಯ ದರವನ್ನು ಕೊಂಚ ಏರಿಸುವುದರಿಂದಾಗಲಿ ಅಥವಾ ಹೊಸ ಸರಕುಗಳ ಮೇಲೆ ಈ ತೆರಿಗೆ ವಿಧಿಸುವುದರಿಂದಾಗಲಿ ಎಂಥ ಕಷ್ಟ ಸನ್ನಿವೇಶವನ್ನಾದರೂ ಎದುರಿಸಬಹುದೆಂದು ಕೆಲವು ಸಾರ್ವಜನಿಕ ಹಣಕಾಸು ತಜ್ಞರು ವಾದಿಸುತ್ತಾರೆ. ಅಲ್ಲದೇ ಈ ತೆರಿಗೆಯನ್ನು ಸಕಾಲದಲ್ಲಿ ಉಪಯೋಗಿಸಿಕೊಂಡರೆ ದೇಶದ ಅರ್ಥ ವ್ಯವಸ್ಥೆಯಲ್ಲಿ ಆವರ್ತಿಸುತ್ತಿರುವ ವಿನಾಶಕಾರಕ ಏರಿಳಿತಗಳನ್ನು ಕೊಂಚ ಮಟ್ಟಿಗಾದರೂ ಹತೋಟಿಯಲ್ಲಿ ಇಟ್ಟುಕೊಳ್ಳಬಹುದೆಂಬುದು ಪ್ರೋ|| ಹ್ಯಾನ್ಸರ್ ವಾದ ಆದರೆ ಈ ವಾದ ಸರ್ವಗ್ರಾಹ್ಯವೆನಿಸುವುದಿಲ್ಲ.
ಈ ತೆರಿಗೆ ವಿಧಿಸುವುದಕ್ಕೆ ಸಾಕಷ್ಟು ವಿರೋಧವೂ ಇದೆ. ಇದು ಸರ್ಕಾರಕ್ಕೆ ಎಷ್ಟೇ ಪ್ರಿಯವಾಗಿದ್ದರೂ ಇದರ ಹೊರೆ ಅಧಿಕವಾಗಿ ಬಡವರ ಮೇಲೆ ಬೀಳುವುದರಿಂದ ಕಲ್ಯಾಣ ಸಾಧನೆಯ ಉದ್ದೇಶ ಹೊಂದಿರುವ ಪ್ರಗತಿಪರ ರಾಷ್ಟ್ರಕ್ಕೆ ಇದೊಂದು ಕುಂದು ಎಂದು ವಾದಿಸಲಾಗಿದೆ. ಇದು ಕೆಲ ಮಟ್ಟಿಗೆ ನಿಜ, ಆದರೆ ಅತ್ಯಾವಶ್ಯಕ ಪದಾರ್ಥಗಳನ್ನು ಈ ತೆರಿಗೆಯಿಂದ ವಿನಾಯತಿಗೊಳಿಸಿ ಭೋಗ ವಸ್ತುಗಳ ಮೇಲೆ ತೆರಿಗೆ ದರವನ್ನು ಹೆಚ್ಚಿಸಿದರೆ ಧಾರಣ ಸಾಮಥ್ರ್ಯ ಸೂತ್ರವನ್ನು ಪಾಲಿಸಿದಂತಾಗುವುದೆಂಬುದನ್ನು ಈ ತೆರಿಗೆಯ ವಿರೋದಿಗಳ ಗಮನಕ್ಕೆ ತರಬಹುದು. ಮೇಲಾಗಿ ತೆರಿಗೆಯ ದರ ಕಡಿಮೆ ಇದ್ದು, ತೆರಿಗೆಗೆ ಬಾಧ್ಯವಾದ ಸರಕು ದೇಶಾದ್ಯಂತ ಬಳಕೆಯಲ್ಲಿದ್ದರೆ, ಈ ತೆರಿಗೆ ಹೆಚ್ಚು ಭಾರ ಎನಿಸದು. 

ಮಾರಾಟ ತೆರಿಗೆಯ ಹೊರೆಯ ಬಗ್ಗೆ ಧೀರ್ಘ ಚರ್ಚೆ ನಡೆದಿದೆ; ಪರಿಣಿತರ ನಡುವೆ ಈ ಚರ್ಚೆ ಇನ್ನೂ ನಡೆಯುತ್ತಲೇ ಇದೆ. ಇದೊಂದು ಪರೋಕ್ಷ ತೆರಿಗೆಯಾದ್ದರಿಂದ ಹೊರೆಯನ್ನು ಸುಲಭವಾಗಿ ಬೇರೊಬ್ಬರ ಮೇಲೆ ವರ್ಗಾಯಿಸಲು ಬರುತ್ತದೆ. ತೆರಿಗೆಯ ತಾತ್ಕಾಲಿಕ ಭಾರವೇನೋ ಮಾರಾಟಗಾರನ ಮೇಲೆಯೇ. ಆದರೆ ಅಂತಿಮ ಹೊರೆಯ ಎಷ್ಟು ಪ್ರಮಾಣವನ್ನು ಬೇರೊಬ್ಬನಿಗೆ ವರ್ಗಾಯಿಸಲು ಸಾಧ್ಯ ಎಂಬ ಪ್ರಶ್ನೆ ಇದೆ. ಅಂತಿಮಭಾರ ಮಾರಾಟಗಾರನ ಮೇಲೋ ಅನುಭೋಗಿಯ ಮೇಲೋ ಎಂಬ ಪ್ರಶ್ನೆ ತೆರಿಗೆಗೆ ಒಳಗಾದ ಪದಾರ್ಥದ ಪೂರೈಕೆ ಮತ್ತು ಬೇಡಿಕೆಗಳ ಪುಟಿತತೆಯನ್ನು ಅವಲಂಬಿಸಿದೆ. ಈ ಕುರಿತಂತೆ ಮೂರು ಸೂತ್ರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ. ಸರಕೊಂದಕ್ಕಿರುವ ಬೇಡಿಕೆಯ ಪುಟಿತತೆ ಅತ್ಯಧಿಕವಾಗಿದ್ದರೆ ಅಂದರೆ ಪದಾರ್ಥವೊಂದರ ಬೆಲೆ ಸ್ವಲ್ಪ ಇಳಿದಾಗ ಬೇಡಿಕೆ ಬಹುವಾಗಿ ಹಿಗ್ಗುವುದಾದರೆ (ಉದಾ: ಭೋಗ ಅಥವಾ ಇತರೆ ಅನಾವಶ್ಯಕ ಪದಾರ್ಥಗಳಿಗಿರುವ ಬೇಡಿಕೆ) ತೆರಿಗೆಯ ಹೊರೆಯನ್ನು ಯಾವ ರೀತಿಯಲ್ಲಿಯೂ ಕೊಳ್ಳುವವನ ಮೇಲೆ ಸಾಗಿಸಲು ಬಾರದು. ಹಾಗಲ್ಲದೇ ಬೇಡಿಕೆಯ ಪುಟಿತತೆ ಅತ್ಯಂತ ಕಡಿಮೆಯಾಗಿದ್ದರೆ, ಅಂದರೆ ಬೆಲೆ ಸ್ವಲ್ಪ ಏರಿದಾಗ ಅಥವಾ ಇಳಿದಾಗ ಬೇಡಿಕೆಯ ಗಾತ್ರದಲ್ಲಿ ಹಿಗ್ಗು-ಕುಗ್ಗುಗಳಿಲ್ಲದಿದ್ದರೆ (ಉದಾ: ಆಹಾರ ಪದಾರ್ಥಗಳು ಮತ್ತು ಇತರೆ ಅತ್ಯಾವಶ್ಯಕ ಪದಾರ್ಥಗಳಿಗಿರುವ ಬೇಡಿಕೆ) ತೆರಿಗೆಯ ಪೂರ್ತಿ ಮೊತ್ತವನ್ನು ಸರಕಿನ ಬೆಲೆಗೆ ಸೇರಿಸಿ ಅನುಭೋಗಿಯ ಮೇಲೆ ಅದನ್ನು ಅನಾಯಾಸವಾಗಿ ತಳ್ಳಿಬಿಡಬಹುದು. ಮೇಲಿನ ಎರಡು ಸಾಧ್ಯತೆಗಳೂ ಅತ್ಯಂತಿಕವಾದಂಥವು, ವಾಸ್ತವ ಪರಿಸ್ಥಿತಿ ಇವೆರಡು ತುದಿಗಳ ನಡುವೆ ಎಲ್ಲಿಯೋ ಇರುತ್ತದೆ. ಬೆಲೆ ಏರಿದರೆ ಅಥವಾ ಇಳಿದರೆ ಬೇಡಿಕೆ ಅಷ್ಟೇ ಪ್ರಮಾಣದಲ್ಲಿ ಅನುಕ್ರಮವಾಗಿ ಏರಿದರೆ ಅಥವಾ ಇಳಿದರೆ ತೆರಿಗೆ ಅರ್ಧ ಹೊರೆ ಬಿಕರಿದಾರನ ಮೇಲೂ, ಮಿಕ್ಕರ್ಧ ಹೊರೆ ಅನುಭೋಗಿಯ ಮೇಲೂ ಬೀಳುತ್ತದೆ. ಮಾರಾಟ ತೆರಿಗೆ ವಿಧಿಸಿದ ಯಾವುದೋ ಒಂದು ಪ್ರದೇಶದ ಬಹು ಸಮೀಪದಲ್ಲಿರುವ ಇನ್ನೊಂದು ಪ್ರದೇಶದಲ್ಲಿ ಮಾರಾಟ ತೆರಿಗೆ ಇಲ್ಲದಿದ್ದ ಪಕ್ಷದಲ್ಲಿ ಮೊದಲನೆಯ ಪ್ರದೇಶದ ಬಳಕೆದಾರರು ತೆರಿಗೆಯಿಂದ ನುಣುಚಿಕೊಳ್ಳುವ ಸಲುವಾಗಿ ಎರಡನೇಯ ಪ್ರದೇಶದಲ್ಲಿ ಸರಕನ್ನು ಕೊಳ್ಳಬಹುದಾದ ಸಾಧ್ಯತೆಯಿರುವದರಿಂದ, ಮೊದಲನೆಯ ಪ್ರದೇಶದಲ್ಲಿಯ ಬಿಕರಿದಾರರು ಈ ತೆರಿಗೆಯನ್ನು ತಾವೇ ಹೊರಬೇಕಾಗುತ್ತದೆ. ಅದಲ್ಲದೇ ಪದಾರ್ಥವೊಂದರ ಮೇಲೆ ತೆರಿಗೆ ಬಿದ್ದಾಗ ಆ ಪದಾರ್ಥ ನೀಡುವಷ್ಟೇ ತೃಪ್ತಿಯನ್ನು ನೀಡಬಲ್ಲ ಇನ್ನೊಂದು ಪದಾರ್ಥದಲ್ಲಿ ತೆರಿಗೆಯ ಹೊರೆಯನ್ನು ಮಾರಾಟಗಾರ ಸುಲಭವಾಗಿ ಬಳಕೆದಾರನ ಮೇಲೆ ತಳ್ಳಲುಬಾರದು. 

ಪದಾರ್ಥವೊಂದರ ಪುಟಿತತೆ ಅತ್ಯಧಿಕವಾಗಿದ್ದರೆ ಅಂದರೆ ಬೆಲೆ ಏರಿದಾಗ ಅಥವಾ ಇಳಿದಾಗ ಪೂರೈಕೆ ಅನುಕ್ರಮವಾಗಿ ವಿಪರೀತ ಹಿಗ್ಗುವುದು ಅಥವಾ ಅತಿಯಾಗಿ ಕುಗ್ಗುವುದು ಸಾಧ್ಯವಿದ್ದಾಗ ಮಾರಾಟ ತೆರಿಗೆಯ ಹೊರೆಯನ್ನು ಪೂರ್ತಿಯಾಗಿ ಅನುಭೋಗಿಗೆ ವರ್ಗಾಯಿಸಬಹುದು. ಹಾಗಲ್ಲದೆ ಪೂರೈಕೆಯ ಪುಟಿತತೆ ಅತ್ಯಂತ ಕಡಿಮೆಯಿದ್ದರೆ, ಅಂದರೆ ಬೆಲೆ ಏರಿದಾಗ ಅಥವಾ ಇಳಿದಾಗ ಪೂರೈಕೆ ಯಾವ ಏರಿಳಿತವೂ ಇಲ್ಲದೇ ಒಂದೇ ಸಮನಾಗಿದ್ದರೆ ಅಥವಾ ಅತೀ ಸ್ವಲ್ಪವೆ ಏರಿಳಿತಕ್ಕೊಳಗಾಗುವುದಿದ್ದರೆ ಮಾರಾಟ ತೆರಿಗೆಯ ಭಾರವನ್ನು ಕೊಳ್ಳುವವನಿಗೆ ವರ್ಗಾಯಿಸಲು ಬಾರದು. ಹಾಗಲ್ಲದೇ ಪೂರೈಕೆಯ ಪುಟಿತತೆ ಅತ್ಯಂತ ಕಡಿಮೆಯಿದ್ದರೆ, ಅಂದರೆ ಬೆಲೆ ಏರಿದಾಗ ಅಥವಾ ಇಳಿದಾಗ ಪೂರೈಕೆ ಯಾವ ಏರಿಳಿತವೂ ಇಲ್ಲದೇ ಒಂದೇ ಸಮನಾಗಿದ್ದರೆ ಅಥವಾ ಅತಿ ಸ್ವಲ್ಪವೇ ಏರಿಳಿತಕ್ಕೊಳಗಾಗುವುದಿದ್ದರೆ ಮಾರಾಟ ತೆರಿಗೆಯ ಭಾರವನ್ನು ಕೊಳ್ಳುವವನಿಗೆ ವರ್ಗಾಯಿಸಲು ಬಾರದು. ಅತ್ಯಂತ ಅವಶ್ಯಕ ಪದಾರ್ಥಗಳ ಮೇಲಿನ ಮಾರಾಟ ತೆರಿಗೆಯನ್ನು ಪೂರೈಸಲು ಪುಟಿತತೆ ಯಾವ ಪ್ರಮಾಣದಲ್ಲೇ ಇರಲಿ, ಗ್ರಾಹಕನಿಗೆ ವರ್ಗಾಯಿಸಬಹುದು.

ಭಾರತದಲ್ಲಿ ಮಾರಾಟ ತೆರಿಗೆ ರಾಜ್ಯಗಳ ಮುಖ್ಯ ಆದಾಯಗಳಲ್ಲಿ ಒಂದಾಗಿದೆ. ಮಾರಾಟ ತೆರಿಗೆ ವಿಧಿಸಲು ಪಾಂತ್ಯ ಸರ್ಕಾರಗಳಿಗೆ ಅಧಿಕಾರ ಮೊತ್ತಮೊದಲಿಗೆ ದತ್ತವಾದ್ದು 1935ರ ಭಾರತ ಸರ್ಕಾರ ಅಧಿನಿಯಮದ ಅಡಿಯಲ್ಲಿ. ಆದರೆ ಇದಕ್ಕೆ ನಿರ್ಭಂದನೆಗಳಿವೆ. ಪತ್ರಿಕೆಗಳ ಮೇಲೆ ಮಾರಾಟ ತೆರಿಗೆ ವಿಧಿಸುವಂತಿಲ್ಲ, ಅಂತರ ರಾಜ್ಯ ಅಥವಾ ಅಂತರ್ ರಾಷ್ಟ್ರೀಯ ವ್ಯಾಪಾರಕ್ಕೆ ಒಳಗಾದ ಪದಾರ್ಥಗಳ ಮೇಲೆ ತೆರಿಗೆ ವಿಧಿಸಲೂ ರಾಜ್ಯಗಳಿಗೆ ಅಧಿಕಾರವಿಲ್ಲ, ಅಗತ್ಯ ಪದಾರ್ಥಗಳೆಂದು ಸಂಸತ್ತು ಘೋಷಿಸುವ ಪದಾರ್ಥಗಳೂ ಇವರಿಂದ ಹೊರತಾಗಿರುತ್ತವೆ, 1956ರಲ್ಲಿ ಸಂವಿಧಾನದಲ್ಲಿ ಮಾಡಿದ ತಿದ್ದುಪಡಿಯಲ್ಲಿ ಅಂತರ್ ರಾಜ್ಯ ವ್ಯಾಪಾರದ ಸರಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.
(ಸಿ.ಬಿ.ಸಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ